ಬಾಗಲಕೋಟೆಯಲ್ಲಿ ಭೂಗತನಾದ ಬಜಂತ್ರಿ ಬೆಳಗಾವಿಯಲ್ಲಿ ತೇಲಿದ್ದಾನೆಯೆ ?

ಇತ್ತೀಚೆಗೆ ಸುದ್ದಿಯಲ್ಲಿರುವ ಬೆಳಗಾವಿಯ ಶಿವಾನಂದ ನೀಲಣ್ಣನವರ ಪ್ರಕರಣ ಓದಿದಾಗ ಹೀಗೆ ಅನ್ನಿಸದೆ ಇರದು. ಈ ಶಿವಾನಂದ ನೀಲಣ್ಣನವರ ಬಡವರ,ಮಧ್ಯಮ ವರ್ಗದವರಿಗೆ ಮೋಸ ಮಾಡುವ ಹುನ್ನಾರದಲ್ಲಿದ್ದಾಗ. ಸರಿಯಾದ ಸಮಯದಲ್ಲಿ ಜಿಲ್ಲಾಡಳಿತವು ಕ್ರಮ ತೆಗೆದುಕೊಳ್ಳದೇ ಹೋಗಿದ್ದರೆ ಬಡವರ ಹಣ “ಹರೋಹರ” ವಾಗಿ ಬಿಡುತ್ತಿತ್ತು.

ಥೇಟ್ ಇಂತಹದೇ ಪ್ರಕರಣ ಬಾಗಲಕೋಟೆ ಜಿಲ್ಲೆಯ ಇಲಕಲ್ ಪಟ್ಟಣದಲ್ಲಿ ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ ಬಜಂತ್ರಿ ಎನ್ನುವನೊಬ್ಬನಿಂದ ನಡೆದು ಹೋಗಿತ್ತು. ಆ ಪರಮ ನೀಚನು ಪೂಜ್ಯ ಮಹಾಂತಪ್ಪ ಅಪ್ಪಗಳ ಕಾಲೇಜಿನಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದ. ಇವನು ಕೂಡ ಅತೀ ಕಡಿಮೆ ಅವಧಿಯಲ್ಲಿ ಹಣ ದ್ವಿಗುಣಗೊಳಿಸುವುದಾಗಿ ಜನರನ್ನು ನಂಬಿಸುತ್ತ, ಒಂದು ದಿನ ಇಂತಹ ಹಣ ಸಾವಿರಾರು ಕೋಟಿ ತಲುಪಿದಾಗ ಅವನು ಹೆಣವಾಗಿ ಮಾರ್ಪಟ್ಟು ಇಲಕಲ್ ನಗರಕ್ಕೆ ತರಲ್ಪಟ್ಟಿದ್ದ. ಅದು ಬಜಂತ್ರಿಯ ಹೆಣವೋ ಅಥವಾ ಮುಂಬೈಯಿಂದ ತಂದ ಬೇನಾಮಿ ಹೆಣವೋ ಎಂದು ಪರೀಕ್ಷಿಸುವ ವ್ಯವಧಾನವು ವಿಜಾಪುರ ಪೋಲಿಸರಲ್ಲಾಗಲಿ ಅಥವಾ ಜನರಿಂದ ಚುನಾಯಿಸಲ್ಪಟ್ಟ ರಾಜಕೀಯ ಪ್ರತಿನಿಧಿಗಳಿಗಾಗಲಿ ಇರಲಿಲ್ಲ. ಅದು ಬಜಂತ್ರಿಯದೇ ಹೆಣವೆಂದು ನಿರ್ಧರಿಸಿ ಅದನ್ನು ಇಲಕಲ್ ಮಣ್ಣಲ್ಲಿ ಮಣ್ಣುಮಾಡಿ ಬಿಟ್ಟರು. ಅದರೊಂದಿಗೆ ಸಾವಿರಾರೂ ಹೂಡಿಕೆದಾರರ ಜೀವನದ ಮೇಲೆ ಚಪ್ಪಡಿ ಕಲ್ಲು ಎಳೆದುಬಿಟ್ಟಿರು.

ಇಂತಹ ಸ್ಕ್ಯಾಮಗಳು ಭಾರತದಲ್ಲಿ ಇದೆ ಮೊದಲಲ್ಲ. ನಾವು ಈಗಾಗಲೇ ಭಾರತದ ಸರ್ವಕಾಲೀನ ಶ್ರೇಷ್ಠ ಸ್ಕ್ಯಾಮರ್ ಗಳಾದ (ವಂಚಕರಾದ) ಸುಬ್ರತಾ ರಾಯ್, ಬಿ.ರಾಮಲಿಂಗ ರಾಜು, ವಿಜಯ ಮಲ್ಯ, ಹರ್ಷದ ಮೆಹ್ತಾ, ಅಬ್ದುಲ್ ಕರಿಮ್ ತೆಲಗಿ, ನಿರವ್ ಮೋದಿ, ಮೇಹುಲ್ ಚೋಕ್ಸಿ, ಕೇತನ್ ಪರೇಖರನ್ನು ಮರೆತುಬಿಟ್ಟಿದ್ದೇವೆ. ಹೀಗಾಗಿ ಇಂತಹ ವಂಚಕರು ಹುಟ್ಟಿಕೊಳ್ಳುತ್ತಲೇ ಇರುತ್ತಾರೆ.

ಆದರೆ ಬೆಳಗಾವಿ ಪೋಲಿಸರು ಸಕಾಲದಲ್ಲಿ ಕಣ್ಣು ತೆರೆಯದೇ ಹೋಗಿದ್ದರೆ ಇವನೂ ಸಹ ಬೆಳಗಾವಿಯ ಮತ್ತೊಬ್ಬ ಕರಿಮಲಾಲ್ ತೆಲಗಿಯೋ ಅಥವಾ ಬಿಜಾಪುರದ ಬಜಂತ್ರಿಯೋ ಆಗುತ್ತಿದ್ದ.

ಇಂತಹವರ ಕಾರ್ಯವೈಖರಿ ಬಹಳ ಸರಳ, ಇವರು ಮಹಾ ಮಾತುಗಾರರು, ಸಾಮಾನ್ಯ ಕುಟುಂಬಗಳಲ್ಲಿ ಜನಿಸಿದ, ಹೆಚ್ಚು ಓದಿಲ್ಲದ ಪ್ರಚಂಡ ಬುದ್ದಿವಂತರು.ಈ ವಂಚಕರು ಆರಂಭದಲ್ಲಿ ಹೊಸ ಹೂಡಿಕೆದಾರರಿಂದ ಬಂದ ಹಣವನ್ನು ಬಳಸಿಕೊಂಡು, ಹಳೆಯ ಹೂಡಿಕೆದಾರರಿಗೆ ನೀಡಿದ ಬರವಸೆಯಂತೆ (೩೬%) ಹೆಚ್ಚಿನ ಬಡ್ಡಿಯನ್ನು ಸರಿಯಾದ ಸಮಯಕ್ಕೆ ನೀಡಿ, ಜನರಲ್ಲಿ ನಂಬಿಕೆ ಹುಟ್ಟಿಸಿಕೊಳ್ಳುತ್ತಾರೆ. ಪ್ರಾರಂಭದಲ್ಲಿ ತಮಗೆ ದೊರೆತ ಲಾಭವನ್ನು ಸತ್ಯವೆಂದು ನಂಬಿದ ಜನರು ತಮ್ಮ ಆಸ್ತಿ, ಜಮೀನು, ಒಡವೆಗಳನ್ನು ಮಾರಿ ಅಥವಾ ನಿವೃತ್ತಿಯ ಪಿಂಚಣಿ ಹಣವನ್ನು ತಂದು ಹೂಡಿಕೆ ಮಾಡುತ್ತಾರೆ. ಇದು ನಿರಂತರವಾಗಿ ನಡೆದು ದೊಡ್ಡ ಮಟ್ಟದ ಪೂಂಜಿ ಕೂಡಿದಾಗ ಅವನು ದೇಶ ತೊರೆಯಬಹುದು ಅಥವಾ ಯಾವಾಗ ಹೊಸಬರಿಂದ ಹಣ ಬರುವುದು ನಿಲ್ಲುತ್ತದೆಯೋ, ಆಗ ಅವನು ಕಟ್ಟಿದ ಇಡೀ ವ್ಯವಸ್ಥೆ ಕುಸಿದುಬಿದ್ದು, ವಂಚಕರು ಕೋಟ್ಯಂತರ ರೂಪಾಯಿಗಳೊಂದಿಗೆ ಕಣ್ಮರೆಯಾಗಿ ಬಿಡುತ್ತಾರೆ. ಇಂತಹದೆ ಕೆಲಸವನ್ನು ಇಲಕಲ್ಲಿನ ಬಜಂತ್ರಿ ಮಾಡಿದ್ದ, ಇನ್ನೂ ದೊಡ್ಡ ಪ್ರಮಾಣದಲ್ಲಿ ಸಹಾರಾದ ಸುಬ್ರತೋ ರಾಯ್ ಮಾಡಿದ್ದ.

ಶಿವಾನಂದ ಎಸ್. ನೀಲಣ್ಣವರ ಮತ್ತು ಅವನ ‘ಶಿವಮ್ ಅಸೋಸಿಯೇಟ್ಸ್’ (ಅಕ್ಯುಮೆನ್) ಸಂಸ್ಥೆಗೆ ಸಂಬಂಧಿಸಿದ ಈ ಪ್ರಕರಣವು ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ ಬಹುಕೋಟಿ ವಂಚನೆಯಾಗಿದೆ. ಬೆಳಗಾವಿ ಜಿಲ್ಲಾಡಳಿತ ಮತ್ತು ಪೊಲೀಸರು ಈ ಬಗ್ಗೆ ಕಠಿಣ ಕ್ರಮ ಕೈಗೊಂಡಿದ್ದು, ಅವರ ಬ್ಯಾಂಕ್ ಖಾತೆಗಳನ್ನು ಜಪ್ತಿ ಮಾಡಿ, ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಇವರು ಸುಮಾರು ೩೫,೦೦೦ ದಿಂದ ೪೫,೦೦೦ ಹೂಡಿಕೆದಾರರಿಂದ (ಇದರಲ್ಲಿ ನಿವೃತ್ತ ಸೈನಿಕರು, ರೈತರು ಮತ್ತು ಮಧ್ಯಮ ವರ್ಗದವರೇ ಹೆಚ್ಚಾಗಿದ್ದಾರೆ) ವಾರ್ಷಿಕ 36% (ತಿಂಗಳಿಗೆ 3%) ಬಡ್ಡಿಯ ಆಮಿಷ ಒಡ್ಡಿ ಸುಮಾರು ೪೫೦೦ ಕೋಟಿ ರೂಪಾಯಿಗಳನ್ನು ಸಾಲ ಹಾಗೂ ಹೂಡಿಕೆಯ ರೂಪದಲ್ಲಿ ಪಡೆದು ವಂಚಿಸಿದ್ದಾರೆಂದು ವರದಿಗಳು ಹೇಳುತ್ತವೆ.

ಈ ಪ್ರಕರಣವನ್ನು ಅಫರಾದವಲ್ಲ ಎಂದು ಕೆಲವು ಕಾನೂನು ತಜ್ಞರು ಈಗಾಗಲೇ ಹೇಳುತ್ತಿದ್ದು ಈ ಅಪರಾಧವನ್ನು ಪೋಲಿಸರಿಗೆ ನಿಭಾಯಿಸುವುದು ಕಷ್ಟವೆಂದು ಹೇಳಲಾರಂಭಿಸಿದ್ದಾರೆ. ಆದರೆ ಲಭ್ಯವಿರುವ ಕಾಯ್ದೆಗಳ ಅಡಿಯಲ್ಲಿ ಶಿವಾನಂದನಿಗೆ ಕೃಷ್ಣನ ಜನ್ಮಸ್ಥಾನಕ್ಕೆ (ಜೈಲಿಗೆ) ಅಟ್ಟಬಹುದು.

ಒಂದು: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅಥವಾ ಸೆಬಿಯಂತಹ ನಿಯಂತ್ರಕ ಸಂಸ್ಥೆಗಳ ಅಧಿಕೃತ ಅನುಮತಿ ಇಲ್ಲದೆ ಸಾರ್ವಜನಿಕರಿಂದ ಠೇವಣಿ ಅಥವಾ ಹೂಡಿಕೆಗಳನ್ನು ಸಂಗ್ರಹಿಸುವುದು ಗಂಭೀರ ಅಪರಾಧ. ಇದು BUDS Act 2019
(ನಿಯಂತ್ರಣ ರಹಿತ ಠೇವಣಿ ಯೋಜನೆಗಳ ನಿಷೇಧ ಕಾಯ್ದೆ) ಅಡಿಯಲ್ಲಿ ಇದು ಕಾನೂನುಬಾಹಿರ. ಯಾವುದೇ ಸರ್ಕಾರಿ ನಿಯಂತ್ರಣವಿಲ್ಲದ ಯೋಜನೆಗಳ ಹೆಸರಿನಲ್ಲಿ ಸಾರ್ವಜನಿಕರಿಂದ ಹಣ ಪಡೆಯುವುದು ಅಥವಾ ಅಂತಹ ಯೋಜನೆಗಳ ಬಗ್ಗೆ ಪ್ರಚಾರ ಮಾಡುವುದನ್ನು ಈ ಕಾಯ್ದೆ ಸಂಪೂರ್ಣವಾಗಿ ನಿಷೇಧಿಸುತ್ತದೆ. ಇದು ಜಾಮೀನು ರಹಿತ ಅಪರಾಧವಾಗಿದೆ. ಇದರೊಂದಿಗೆ ಇತ್ತೀಚಿಗೆ ಕರ್ನಾಟಕದಲ್ಲಿ ಇಂತಹ ಅನೇಕ ಪ್ರಕರಣಗಳು ವರದಿಯಾಗುತ್ತಿದ್ದು ಅವುಗಳನ್ನು ತಡೆಗಟ್ಟಲು ಕರ್ನಾಟಕ ಸರ್ಕಾರವು ಸಹ KPID Act 2004 ಜಾರಿಗೆ ತಂದಿದೆ (ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿನ ಠೇವಣಿದಾರರ ಹಿತರಕ್ಷಣೆ ಕಾಯ್ದೆ೨೦೦೪) ಇದು ಮುಗ್ದ ಠೇವಣಿದಾರರನ್ನು ರಕ್ಷಿಸಲು ಇರುವ ಕರ್ನಾಟಕ ರಾಜ್ಯದ ವಿಶೇಷ ಕಾಯ್ದೆಯಾಗಿದೆ. ಈ ಕಾಯ್ದೆಯಡಿ ರಾಜ್ಯ ಸರ್ಕಾರಕ್ಕೆ ವಿಶೇಷ ಅಧಿಕಾರವಿರುತ್ತದೆ. ವಂಚನೆ ಮಾಡಿದ ವ್ಯಕ್ತಿ ಅಥವಾ ಸಂಸ್ಥೆಯ ಚರ ಮತ್ತು ಸ್ಥಿರ ಆಸ್ತಿಗಳನ್ನು ತಕ್ಷಣವೇ ಜಪ್ತಿ ಮಾಡಿ, ಅವುಗಳನ್ನು ಸಾರ್ವಜನಿಕ ಹರಾಜು ಹಾಕುವ ಮೂಲಕ ವಸೂಲಾದ ಹಣವನ್ನು ಸಂತ್ರಸ್ತ ಠೇವಣಿದಾರರಿಗೆ ಮರಳಿ ನೀಡಲು ಈ ಕಾಯ್ದೆ ಅವಕಾಶ ಕಲ್ಪಿಸುತ್ತದೆ.
ಇವುಗಳಲ್ಲದೆ ಭಾರತೀಯ ನ್ಯಾಯ ಸಂಹಿತೆ ೨೦೨೩, (ಹಳೆಯ ಭಾರತೀಯ ದಂಡ ಸಂಹಿತೆ I.P.C.)ಕಾನೂನಿನ ಅಡಿಯಲ್ಲಿ ಪೊಲೀಸರು ಎಫ್‌. ಐ. ಆರ್. ದಾಖಲಿಸಿಕೊಳ್ಳಬಹುದು. ಈ ಕಾಯ್ದೆಅಡಿಯಲ್ಲಿ ಸಾರ್ವಜನಿಕರಿಗೆ ನಂಬಿಕೆ ದ್ರೋಹ ಎಸಗುವುದು (Criminal Breach of Trust) ಮತ್ತು ವಂಚನೆ (Cheating) ಮಾಡುವುದಕ್ಕೆ ಸಂಬಂಧಿಸಿದ ಕಠಿಣ ಸೆಕ್ಷನ್‌ಗಳನ್ನು ಅನ್ವಯಿಸಬಹುದು.

ಇಂತಹ ವಂಚಕರು ಮಧ್ಯಮವರ್ಗದ ಜನರ ಆರ್ಥಿಕ ಅಸಹಾಯಕತೆ ಮತ್ತು ಆಸೆಗಳನ್ನು ಬಂಡವಾಳ ಮಾಡಿಕೊಳ್ಳುತ್ತಾರೆ. ವಿಜಾಪುರ ಜಿಲ್ಲೆಯ ಇಳಕಲ್ ಹಗರಣವಾಗಲಿ ಅಥವಾ ಬೆಂಗಳೂರಿನಲ್ಲಿ ನಡೆದ ಇತಿಹಾಸದ ಅತಿ ದೊಡ್ಡ ಐ. ಎಂ. ಎ (IMA) ಹಗರಣವಾಗಲಿ, ಇವೆಲ್ಲವೂ ಇದೇ ತಂತ್ರವನ್ನು ಅನುಸರಿಸಿ ಜನರನ್ನು ಬೀದಿಗೆ ತಂದಿದ್ದವು.

ಪ್ರಸ್ತುತ ಬೆಳಗಾವಿ ಜಿಲ್ಲಾಡಳಿತವು ಸಂತ್ರಸ್ತರಿಗಾಗಿ ವಿಶೇಷ ಸಹಾಯವಾಣಿ ಮತ್ತು ಕೌಂಟರ್ ತೆರೆದಿದೆ. ಶಿವಮ್ ಅಸೋಸಿಯೇಟ್ಸ್‌ನಲ್ಲಿ
ಹಣಹೂಡಿ ಮೋಸಹೋದ ಸಾರ್ವಜನಿಕರು ತಮ್ಮ ಹಣಕಾಸು ವ್ಯವಹಾರದ ದಾಖಲೆಗಳನ್ನು (ಬ್ಯಾಂಕ್ ಪಾಸ್‌ಬುಕ್, ಚೆಕ್, ಆನ್‌ಲೈನ್ ಟ್ರಾನ್ಸ್‌ಫರ್ ರಶೀದಿ) ನೀಡಿ ದೂರು ದಾಖಲಿಸುವಂತೆ ಜಿಲ್ಲಾಧಿಕಾರಿಗಳು ಈಗಾಗಲೇ ತಿಳಿಸಿದ್ದಾರೆ. ಮುಂಬರುವ ದಿನಗಳಲ್ಲಿ ವಿಶೇಷ ನ್ಯಾಯಾಲಯದ ಮೂಲಕ ಇವರ ಆಸ್ತಿ ಮುಟ್ಟುಗೋಲು ಹಾಕಿಕೊಂಡು ಜನರಿಗೆ ನ್ಯಾಯ ಒದಗಿಸುವ ಪ್ರಕ್ರಿಯೆ ನಡೆಯಬೇಕಿದೆ. ಆದರೆ ಇದನ್ನು ಕರ್ನಾಟಕ ಸರಕಾರ ಮಾಡುತ್ತದೆಯೋ ಅಥವಾ ಮತ್ತೊಮ್ಮೆ ಬೇನಾಮಿ ಹೆಣದ ‘ಧಪನ್’ ಆಗುತ್ತದೆ ಎಂಬುದನ್ನು ಕಾಲವೇ ನಿರ್ಧರಿಸಲಿದೆ.

ಗಮನಿಸಿ; ಒಬ್ಬ ಕ್ರಿಮಿನಲ್,ತನ್ನನ್ನು ತಾನೆ ಬಣ್ಣಿಸಿಕೊಳ್ಳುತ್ತ Worlds Best Person ಎಂದು ಬರೆದುಕೊಳ್ಳುತ್ತಾನೆ. ಮೇಲಾಗಿ ಇವನು ಓದಿದ್ದು SSLC, ನಾಲ್ಕಾರು ಪುಡಿ ದಂದೆಗಳನ್ನು ಮಾಡಿ ಕೈ ಸುಟ್ಟುಕೊಂಡ ವ್ಯವಹಾರಸ್ತ. ಕೊನೆಯದಾರಿಯಾಗಿ ಸಾಮಾನ್ಯರನ್ನು ವಂಚಿಸುವ ಉದ್ಯೋಗಲ್ಲಿ ಸಫಲನಾಗುತ್ತಾನೆ. ಶಿವ ಹರ ಎನ್ನುತ್ತ ತನ್ನನ್ನು ತಾನೆ ಡಾ.ಎಂದು ಕರೆದುಕೊಳ್ಳುತ್ತಾನೆ. ಅಥವಾ ಡಾಕ್ಟರೇಟ್ ತಗೆದುಕೊಂಡು ಬಿಡುತ್ತಾನೆ. ಇವನಿಗೆ ಡಾಕ್ಟರೇಟ್ ಕೊಟ್ಟವರಾರು?
#dc belgaum# #police commissioner belgaum#

Leave a Comment